ಆರ್ಲಿಂಗ್ ಟನ್
	
ಅಮೆರಿಕ ಸಂಯುಕ್ತ ಸಂಸ್ಥಾನದ ಮಸ್ಸಾಚುಸೆಟ್ಸ್ ಪ್ರಾಂತ್ಯದ ಒಂದು ಪಟ್ಟಣ. ಬಾಸ್ಟನ್ ನಗರದ ವಾಯುವ್ಯಕ್ಕೆ ಸುಮಾರು 13 ಕಿ.ಮೀ. ದೂರದಲ್ಲಿದೆ. ಬಾಸ್ಟನ್ ಹಾಗೂ ಮೇನ್ ರೈಲು ಮಾರ್ಗ ಇದಕ್ಕೆ ಸಂಪರ್ಕವನ್ನು ಕಲ್ಪಿಸುವುದು. ಇದರ ಒಟ್ಟು ವಿಸ್ತೀರ್ಣ 5.50 ಚ.ಮೈ. ಜನಸಂಖ್ಯೆ 44,353 (1950). ಒಂದು ಸುಂದರವಾದ ಸ್ಪೈ ಎಂಬ ಕೊಳವಿದೆ. ತೋಟಗಾರಿಕೆ ಮುಖ್ಯ ಕಸುಬು. ಪಿಯಾನೊ, ದಿನಬಳಕೆ ಯಂತ್ರದ ಸಾಮಾನುಗಳು ಹಾಗೂ ಚಿತ್ರಪಟ ಸಾಮಗ್ರಿಗಳನ್ನು ತಯಾರಿಸುವ ಕಾರ್ಖಾನೆಗಳಿವೆ. 1807ರಲ್ಲಿ ವೆಸ್ಟ್‍ಕೇಂಬ್ರಿಡ್ಜ್ ಎಂಬ ಹೆಸರಿನಿಂದ ಆರ್ಲಿಂಗ್‍ಟನ್ ಪಟ್ಟಣ ಮಾರ್ಪಾಡಾಯಿತು. ಆದರೆ 1807ರಲ್ಲಿ ಆರ್ಲಿಂಗ್‍ಟನ್ ಎಂಬ ಹೆಸರನ್ನೇ ಮತ್ತೆ ಸ್ವೀಕರಿಸಲಾಯಿತು.
	
ವರ್ಜೀನಿಯದಲ್ಲಿ ಆರ್ಲಿಂಗ್‍ಟನ್ ಎಂಬ ಒಂದು ಐತಿಹಾಸಿಕ ಗೃಹ ಪೋಟೋಮಾಕ್ ನದಿಯ ಪಕ್ಕದಲ್ಲಿ ವಾಷಿಂಗ್‍ಟನ್ ಡಿ.ಸಿ.ಗೆ ಎದುರಿನಲ್ಲಿದೆ. ಒಮ್ಮೆ ಈ ಗೃಹ ಜಾರ್ಜ್ ವಾಷಿಂಗ್‍ಟನ್‍ನ ಸ್ವತ್ತಾಗಿತ್ತು. ಅನಂತರ ಆತನ ಮೊಮ್ಮಗನ ದತ್ತು ಸ್ವತ್ತಾಯಿತು. ಈತನ ಮಗಳನ್ನು ಮದುವೆಯಾದ ರಾಬರ್ಟ್ ಈಲೀಗೆ 1831ರಲ್ಲಿ ದೊರಕಿತು. ಕೆಲವು ಕಾಲಾನಂತರ ಆರ್ಲಿಂಗ್‍ಟನ್ ರಾಷ್ಟ್ರದ ಸಮಾಧಿ ಸ್ಥಳವಾಗಿ ಅನೇಕ ಅಗ್ರಗಣ್ಯ ವ್ಯಕ್ತಿಗಳ ಹಾಗೂ ಸೈನಿಕರ ಬೀಡಾಯಿತು. ವಸಾಹತು ಕಲೆಗೆ ಈ ಕಟ್ಟಡ ಇಂದಿಗೂ ಒಂದು ಮಾದರಿ. ಆರ್ಲಿಂಗ್‍ಟನ್ ಗೃಹದ ಸುತ್ತಲಿನ ರಾಷ್ಟ್ರೀಯ ಸಮಾಧಿ ಪ್ರದೇಶ 400 ಎಕರೆಗಳಿಗಿಂತಲೂ ಹೆಚ್ಚು. ಇದೊಂದು ರಮಣೀಯ ಪ್ರದೇಶ.										
(ಎಂ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ